ಸಾಬೂನುಗಳು
	ಮೇದಾಮ್ಲಗಳ ಸೋಡಿಯಮ್ ಅಥವಾ ಪೊಟ್ಯಾಸಿಯಮ್ ಲವಣಗಳು (ಸೋಪ್ಸ್). ಉಚ್ಚ ಮೇದಾಮ್ಲಗಳ (ನೇರಸರಣಿ ಕಾರ್ಬಾಕ್ಸಿಲಿಕ್ ಆಮ್ಲಗಳು; ಪ್ರತಿಯೊಂದು ಅಣುವಿನಲ್ಲಿ 10-18 ಕಾರ್ಬನ್ ಪರಮಾಣುಗಳು) ಕ್ಷಾರಲೋಹ ಅಥವಾ ಆದೇಶಿತ ಅಮೋನಿಯಮ್ ಲವಣಗಳು ಎಂಬ ಸಾರ್ವತ್ರೀಕೃತ ವ್ಯಾಖ್ಯಾನವೂ ಉಂಟು. ಸಾಬೂನುಗಳು ವಾಸ್ತವವಾಗಿ ಮಾರ್ಜಕಗಳ ವಿಶಿಷ್ಟ ವರ್ಗವಾಗಿದ್ದರೂ ಸಂಶ್ಲೇಷಿತ ಸಾಬೂನುಗಳನ್ನು ಮಾತ್ರ ಮಾರ್ಜಕಗಳು ಎನ್ನುವುದು ರೂಢಿ. 

	ಎಸ್ಟರ್ ಕೂಡಿಕೆಗಳನ್ನು ಜಲವಿಭಜಿಸಿ ನೈಸರ್ಗಿಕ ಟ್ರೈಗ್ಲಿಸರೈಡುಗಳಿಂದ, ಅರ್ಥಾತ್, ಸಸ್ಯ ಅಥವಾ ಪ್ರಾಣಿಜನ್ಯ ಮೇದಸ್ಸು ಹಾಗೂ ತೈಲಗಳಿಂದ ಸಾಬೂನು ತಯಾರಿಸುತ್ತಾರೆ. ಗ್ಲಿಸರಿನ್ ಮತ್ತು ಮೇದಾಮ್ಲದ (ಸಾಮಾನ್ಯವಾಗಿ ಪಾಮಿಟಿಕ್ ಅಥವಾ ಸ್ಟೀಯರಿಕ್ ಅಥವಾ ಓಲಿಕ್ ಆಮ್ಲ) ಸಂಯುಕ್ತಗಳೇ ಮೇದಸ್ಸು ಮತ್ತು ತೈಲಗಳು. ಈ ಸಂಯುಕ್ತಗಳನ್ನು ಕ್ಷಾರದ ಜಲೀಯ ದ್ರಾವಣದಿಂದ ಉಪಚರಿಸಿದರೆ, ಅರ್ಥಾತ್, ಸಾಬೂನೀ ಕರಿಸಿದರೆ, ವಾಣಿಜ್ಯಮೌಲ್ಯವಿರುವ ಗ್ಲಿಸರಿನ್ ಮತ್ತು ಮೇದಾಮ್ಲದ ಕ್ಷಾರಲೋಹ ಲವಣ (ಸಾಬೂನು) ಲಭ್ಯ. ಉದಾ:  ತೆಂಗಿನೆಣ್ಣೆಯಲ್ಲಿರುವ ಮೇದಸ್ಸು ಪಾಮಿಟಿನ್. ಇದು ಗ್ಲಿಸರಿನ್ ಮತ್ತು ಪಾಮಿಟಿಕ್ ಆಮ್ಲದ ಎಸ್ಟರ್. ಇದನ್ನು ಸೋಡಿಯಮ್ ಹೈಡ್ರಾಕ್ಸೈಡಿನಿಂದ ಸಾಬೂನೀಕರಿಸಿದರೆ ಸೋಡಿಯಮ್ ಪಾಮಿಟೇಟ್ (ಸಾಬೂನು) ಮತ್ತು ಗ್ಲಿಸರಿನ್ ಲಭ್ಯ. ಸೋಡಿಯಮ್ ಹೈಡ್ರಾಕ್ಸೈಡಿನಿಂದ ಸಾಬೂನೀಕರಿಸಿದರೆ ಗಡಸು ಸಾಬೂನು ಗಳೂ ಪೊಟ್ಯಾಸಿಯಮ್ ಹೈಡ್ರಾಕ್ಸೈಡಿನಿಂದ ಸಾಬೂನೀಕರಿಸಿದರೆ ಮೃದು ಸಾಬೂನುಗಳೂ ಲಭ್ಯ.

	ಸಸ್ಯಜನ್ಯ ಮೇದಸ್ಸು ಮತ್ತು ತೈಲದ ಸಾಮಾನ್ಯ ಆಕರಗಳು: ತೆಂಗು, ತಾಳೆ, ಆಲಿವ್, ಸೋಯಬೀನ್, ಮುಸುಕಿನ ಜೋಳ, ಹರಳು, ನಾರಗಸೆಬೀಜ ಮತ್ತು ಹತ್ತಿಬೀಜ. ಪ್ರಾಣಿಜನ್ಯದವುಗಳ ಆಕರಗಳು: ಟ್ಯಾಲೊ (ಗೊರಸು ಪ್ರಾಣಿಗಳ ಚರಬಿ) ಮತ್ತು ಮೀನಿನೆಣ್ಣೆ. ಸಾಬೂನಿನ ಅಪೇಕ್ಷಿತ ಗುಣ ಆಧರಿಸಿ ಮೇದಸ್ಸು ಮತ್ತು ಕ್ಷಾರಲೋಹದ ಆಯ್ಕೆ. ಉದಾ: ಕ್ಷೌರದ ಸಾಬೂನು-ಸ್ಟೀಯರಿಕ್ ಆಮ್ಲದ ಸೋಡಿಯಮ್ ಪೊಟ್ಯಾಸಿಯಮ್ ಮಿಶ್ರಲವಣ. 

	ಬಹುತೇಕ ಸಾಬೂನುಗಳು ಕೊಳೆ ಮತ್ತು ಜಿಡ್ಡು ತೆಗೆಯಬಲ್ಲ ಶುಚಿಕಾರಕಗಳು. ಸಾಬೂನುಗಳ ಅಣುಗಳ ಧ್ರುವೀಯತೆಯಲ್ಲಿ  ಸ್ಪಷ್ಟ ಅಸಮತೋಲ ಉಂಟು. ಆದ್ದರಿಂದ ಅವು ಧ್ರುವೀಯ ಮತ್ತು ಅಧ್ರುವೀಯ ದ್ರಾವಕಗಳಲ್ಲಿ ಅಸಾಧಾರಣ ವಿಲೇಯತೆ (ಸಾಲ್ಯುಬಿಲಿಟಿ) ಮತ್ತು ಪ್ರಾವಸ್ಥೆ (ಫೇಸ್) ವೈಲಕ್ಷಣ್ಯಗಳನ್ನು ಪ್ರದರ್ಶಿಸುತ್ತವೆ. ಅಣುಸಂರಚನೆಯ ವಿಶಿಷ್ಟತೆ ಇದಕ್ಕೆ ಕಾರಣ. ಅಣುವಿನ ಒಂದು ತುದಿ ಜಲಪ್ರೇಮಿ, ಇನ್ನೊಂದು ತುದಿ ಜಲದ್ವೇಷಿ ಮತ್ತು ಮೇದೋಪ್ರೇಮಿ. ಒಟ್ಟಾರೆ ಪರಿಣಾಮ: ವಾಯು-ದ್ರಾವಣ, ನೀರು-ತೈಲ ಮುಂತಾದ ಉಭಯಸಾಮಾನ್ಯ ಮುಖದಲ್ಲಿ (ಇಂಟರ್‍ಫೇಸ್) ಕರ್ಷಣೆ (ಟೆನ್ಷನ್) ಕ್ಷೀಣಿಸಿ ನೊರೆ ಉಂಟಾಗುತ್ತದೆ ಮತ್ತು ಅವಿಲೇಯ ಪದಾರ್ಥಗಳು (ಉದಾ: ಕೊಳೆ, ಜಿಡ್ಡು) ನೀರಿನಲ್ಲಿ ಲೀನಿಸುತ್ತವೆ. ಈ ಗುಣವುಳ್ಳ ಪದಾರ್ಥಗಳಿಗೆ ಮೇಲೈಪಟುಕಾರಕಗಳು (ಸರ್ಫೇಸ್ ಆ್ಯಕ್ಟಿವ್ ಏಜೆಂಟ್, ಸರ್ಫೇಕ್ಟೆಂಟ್) ಎನ್ನುತ್ತಾರೆ.

	ಕ್ಷಾರೀಯ ಭಸ್ಮ ಅಥವಾ ಇತರ ಲೋಹ ಲವಣಗಳ ಲೋಹೀಯ ಸಾಬೂನುಗಳೂ ಉಂಟು. ಇವು ನೀರಿನಲ್ಲಿ ಅತಿ ಅವಿಲೇಯ. ಎಂದೇ, ಇವು ಅಜಲೀಯ ವ್ಯವಸ್ಥೆಗಳಲ್ಲಿ ಮಾತ್ರ ಉಪಯುಕ್ತ (ಉದಾ: ಕೀಲೆಣ್ಣೆ, ತುಕ್ಕು ನಿರೋಧಕ  ಮತ್ತು ನಾಪಾಮ್‍ಗಳಿಗೆ ಸಂಕಲ್ಯಗಳಾಗಿ).						
			(ಎಚ್.ಜಿ.ಎಸ್.

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ
)